ಅಟಾರ್ನಿ
	
ಏಜಂಟ್ ಅಥವಾ ವ್ಯವಹಾರ ಪ್ರತಿನಿಧಿ. ಖಾಸಗಿ ಕೆಲಸದಲ್ಲಿ ಪ್ರಾತಿನಿಧ್ಯ ವಹಿಸುವ ಜನರಿಗೆ ಏಜಂಟ್ ಏನ್ನುವ ಶಬ್ದ ವಿಶೇಷವಾಗಿದ್ದರೂ 'ಪವರ್ ಆಫ್ ಅಟಾರ್ನಿ ಧಾರಕ (ಪ್ರಾತಿನಿಧ್ಯದ ಅಧಿಕಾರವುಳ್ಳವ) ಎಂಬ ಅರ್ಥದಲ್ಲಿ ಅಟಾರ್ನಿ ಶಬ್ದ ಈಗಲೂ ರೂಢಿಯಲ್ಲಿದೆ. ಅಟಾರ್ನಿ ವಕೀಲಿವೃತ್ತಿ ಬೊಂಬಾಯಿ, ಮದ್ರಾಸ್, ಕಲ್ಕತ್ತ ನಗರಗಳಲ್ಲಿ ಇಂಗ್ಲೀಷ್ ಕಾಯಿದೆಯೊಡನೆ ನಮ್ಮ ದೇಶವನ್ನು ಪ್ರವೇಶಿಸಿತು. ಅಟಾರ್ನಿಗೆ ಪ್ರಚಲಿತವಿದ್ದ ಇನ್ನೊಂದು ಹೆಸರು ಸಾಲಿಸಿಟರ್. ಇಂಗ್ಲೆಂಡಿನಲ್ಲಿ 1873ರವರೆಗೆ ಕಾಮನ್ ಲಾ ಕೋರ್ಟುಗಳಲ್ಲಿ ಕೆಲಸಮಾಡುವವರಿಗೆ ಅಟಾರ್ನಿ ಅನ್ನುತ್ತಿದ್ದರು. ಚಾನ್ಸರಿ ಕೋರ್ಟುಗಳ ಸಮನ್ವಯವಾದ ಮೇಲೆ ಇಬ್ಬರಿಗೂ ಸಾಲಿಸಿಟರ್ ಎಂಬ ಪದವನ್ನೇ ಉಪಯೋಗಿಸುವಂತೆ ಕಾಯಿದೆಯಾಯಿತು. ಈ ಪದ್ಧತಿ ಈಗ ಬೊಂಬಾಯಿ ಮತ್ತು ಕಲ್ಕತ್ತ ಹೈಕೋರ್ಟುಗಳಲ್ಲಿ ಮೂಲ ದಾವಾ ವಿಚಾರಣೆಗಳಲ್ಲಿ ರೂಢವಾಗಿದೆ. ಈ ಪದ್ಧತಿಯಂತೆ ಪ್ರತಿಯೊಂದು ಕೇಸಿನ ವಿಚಾರಣೆ ಹಾಗೂ ನ್ಯಾಯ ಪ್ರತಿಪಾದನೆಗಿಂತ ಪೂರ್ವದ ಕೆಲಸವನ್ನು ಸಾಲಿಸಿಟರ್ ಮಾಡುತ್ತಾರೆ. ಕಾಗದಪತ್ರಗಳನ್ನು ತಯಾರಿಸುವುದು, ದಾಖಲು ಮಾಡುವುದು, ಅವುಗಳ ಮೇಲೆ ಸಹಿ ಹಾಕುವುದು, ಸಾಕ್ಷಿ-ಪುರಾವೆಗಳ ಸಂಗ್ರಹ, ಸಾಕ್ಷಿದಾರರಿಗೆ ಸಮನ್ ಕಳುಹಿಸುವುದು, ಹಕೀಕತ್ ಮತ್ತು ಕಾಯಿದೆಗಳ ಸ್ಥೂಲ ಟಿಪ್ಪಣಿಗಳನ್ನು ತಯಾರಿಸುವುದು, ಯೋಗ್ಯವೆನಿಸಿದಾಗ ಪ್ರತಿವಾದಿ ಸಾಲಿಸಿಟರ್ ಜೊತೆ ರಾಜಿ ಮಾಡುಕತೆ ನಡೆಸುವುದು-ಇವೇ ಮೊದಲಾದ ಕೆಲಸಗಳನ್ನು ಸಾಲಿಸಿಟರ್ ಕೈಗೊಳ್ಳುತ್ತಾನೆ. ಈತ ಕೊಟ್ಟ ಮಾಹಿತಿಗಳ ಮೇಲೆ ಕೋರ್ಟಿನ ಮುಂದೆ ಪ್ರತಿಪಾದನೆ ಮಂಡಿಸುವುದು ಅಡ್ವೊಕೇಟ್ ಅಥವಾ ಬ್ಯಾರಿಸ್ಟರನ ಕಾರ್ಯ. ಇದರಿಂದ ಕೇಸುಗಳ ನಿರ್ವಹಣ ಕೌಶಲ ಹೆಚ್ಚುವುದೆಂದು ಕೆಲವು ತಜ್ಞರ ವಾದ. ಈ ದ್ವಿವಿಧ ಪದ್ಧತಿ ಖರ್ಚಿಗೆ ಕಾರಣವೆಂದು ತದ್ವಿರೋಧಿಗಳ ವಾದ. ವಕೀಲರೊಳಗಿನ ಈ ಶ್ರಮ ವಿಭಜನೆ ಇಂಗ್ಲೆಂಡ್, ಫ್ರಾನ್ಸ್, ಇಟಲಿ ಮೊದಲಾದ ಕೆಲವು ದೇಶಗಲ್ಲಿ ರೂಢಿಯಲ್ಲಿದೆ. ಅಡ್ವೊಕೇಟ್ ಆಕ್ಟಿನ ಸೆಕ್ಷನ್ 31 ಬೊಂಬಾಯಿ, ಕಲ್ಕತ್ತ ಹೈಕೋರ್ಟುಗಳಿಗೆ ಅಟಾರ್ನಿಗಳ ಅರ್ಹತೆ, ಪ್ರವೇಶ, ಶಿಸ್ತಿನ ಕ್ರಮ ಮೊದಲಾದುವುಗಳ ಬಗ್ಗೆ ಕಾಯಿದೆ ಮಾಡಲು ಅಧಿಕಾರವನ್ನು ಕೊಟ್ಟು ಈ ಪದ್ಧತಿಯನ್ನು ಉಳಿಸಿದೆ. ಸಾಲಿಸಿಟರ್‍ಗಳು ವಿಶೇಷವಾಗಿ ಫರ್ಮ (ಬಾಗೇದಾರಿ) ಮಾಡಿಕೊಂಡು ಕೆಲಸಮಾಡುವರು. ಸಾಲಿಸಿಟರ್ ಆಗುವವನು ಆರ್ಟಿಕಲ್ಡ್ ಕ್ಲರ್ಕ ಆಗಿ ಕೆಲವು ವರ್ಷ ಸಾಲಿಸಿಟರ್ ಕೈಕೆಳಗೆ ಕೆಲಸಮಾಡಿ ಅನುಭವ ಪಡೆದ ಅನಂತರ ನಿರ್ದಿಷ್ಟ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕಾಗುವುದು.								
(ವಿ.ಆರ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ